ಕಫನ್

ಸಂಪ್ರದಾಯದ ಸೋಗಿನಲ್ಲಿ
ನೂರೆಂಟು ಸಂಕೋಲೆಗಳು
ಹೆಸರು ಬದಲಿಸಿ
ವೇಷ ಮರೆಸಿಕೊಂಡು
ಕಾಡುತ್ತವೆ

ನೂರೆಂಟು ತವಕ ತಲ್ಲಣಗಳು
ಅದುಮಿಟ್ಟ ಸಾವಿರಾರು ಬಿಕ್ಕುಗಳು,
ಕಣ್ಣಲ್ಲೇ ಕರಗಿಹೋದ ಕನಸುಗಳು
ಹುಸಿ ಬದುಕಿನ
ಇಲ್ಲದ ಪ್ರತಿಷ್ಠೆಗೆ
ತಲ್ಲಣಿಸಿ ಕುದ್ದುಹೋದ
ಅಸಹಾಯಕ ದೇಹಗಳು
ಬೆಂದು ಹೋಗುತ್ತವೆ
ಉಸಿರುಗಟ್ಟಿ ಒದ್ದಾಡುತ್ತವೆ
ಹೊದ್ದ ಬಟ್ಟೆಯೊಳಗೆ,

ಮುಚ್ಚಿಕೊಳ್ಳಲಿಕ್ಕೇನಿದೆ
ಹರಿದ ಬಟ್ಟೆ, ,ಹಸಿದ ಹೊಟ್ಟೆ
ಮೂಳೆಗಂಟಿದ ಚರ್ಮ
ಹೊದ್ದ ಚಾದರದೊಳಗೆ
ಭಯಕ್ಕೆ ತತ್ತರಿಸಿದ ಪಿಳಿಪಿಳಿ ಕಣ್ಣುಗಳು,
ಮೈಮನ ಸುಟ್ಟುಕೊಂಡ ಜೀವಗಳು
ನೂರೆಂಟು ಅತ್ತರು ಪೂಸಿಕೊಂಡು
ಹೊದ್ದುಕೊಂಡು ಸಾಗುತ್ತಿವೆ ಕಫನ್.

ಅಹಿಂಸಾವಾದ

ರಾಶಿ ರಾಶಿ ಹೆಣಗಳು

ಸಿಡಿದ ಬಾಂಬಿನ ತುಣುಕುಗಳು,

ಸ್ವಚ್ಛ ಮಾಡಿ ಬೇಗ

ಇಲ್ಲೊಂದು ನಾಗರಿಕ ಸಮಾಜ ಕಟ್ಟಬೇಕಿದೆ
ಈ ಕಾಡು ಜನರಿಗೇನು ಗೊತ್ತು

ದೇಶ , ಸಂಸ್ಕೃತಿ !

ವಿದೇಶಿಗರಿಗೆ ತಿಳಿಸಲು ರೆಸಾರ್ಟ ಕಟ್ಟಬೇಕಿದೆ

ಬೇಗ ಜಾಗ ಖಾಲಿ ಮಾಡಿ !
ಪರಮ ಕೊಳಕು, ದರಿದ್ರ ಜನ

ಇವರನ್ನು  ಖಾಲಿ ಮಾಡಿ

ಇಲ್ಲೊಂದು ನಾಗರಿಕ ಸಮಾಜ ಕಟ್ಟಬೇಕಿದೆ

ಛೇ !ಇಂತಹ ಸಣ್ಣ ಪುಟ್ಟ ಮಾತಿಗೂ

ಬಂದೂಕೂ ಕೈಗೆತ್ತಿಕೊಳ್ಳುವುದೇ?

ಬೇಗ ಮುಗಿಸಿ ಇವರನ್ನು

ಹಿಂಸೆಯನ್ನು  ತಡೆಗಟ್ಟಬೇಕಿದೆ !

 

ನನ್ನೂರ ಕೋಗಿಲೆಗಳು ಹಾಡುವುದಿಲ್ಲ !

ಗುಳಿಬಿದ್ದ ಕೆನ್ನೆ, ಬಾಗಿದ ಬೆನ್ನು,

ಎಳೆ ಹುಡುಕುತಪಾತಾಳಕ್ಕಿಳಿದಿರುವ ಕಣ್ಣು

ಉಸಿರಿಗೊಮ್ಮೆ ಉಬ್ಬಸಪಡುವ

ಲಾಳಿಯ ಜೊತೆ ತೋಯ್ದಾಡುವ ಜೀವ

ಶತಮಾನಗಳ ಸುಕ್ಕುಗಳುಹಣೆಯ ತುಂಬ

ಮಗ್ಗದ ಕುಣಿಗೆ ನೇತು ಬಿದ್ದ

ನನ್ನೂರ ಕೋಗಿಲೆಗಳು ಹಾಡುವುದಿಲ್ಲ !

ಕೋಟೆಗೆ ಕಲ್ಲಾಗಿಮಹಲಿಗೆ ಮಂಚವಾಗಿ

ಉಳ್ಳವರ ಒಲೆಯ ಉರುವಲಾಗಿ

ಉರಿಯುತ್ತಿರುವ ನನ್ನೂರ ಕೋಗಿಲೆಗಳು ಹಾಡುವುದಿಲ್ಲ !

ಶತಶತಮಾನಗಳ ಅಂಧಕಾರದಲಿ

ಬೆಳಕು ಕಾಣದೆಭಾಷೆ ಮರೆತ

ನನ್ನೂರ ಕೋಗಿಲೆಗಳು ಹಾಡುವುದಿಲ್ಲ !

 

ಎಡಬಲದ ಹಂಗಿನಲ್ಲಿ

ಚೌರಸ್ತೆಯಲ್ಲೊಮ್ಮೆ
ದಿಕ್ಕು ಕಾಣದೆ ಕುಳಿತೆ
ರೆಕ್ಕೆ ಪುಕ್ಕಗಳೊಡನೆ
ಹುಟ್ಟಿ ಬಂತೊಂದು ಕವಿತೆ
ಹಾರು ಹೋಗು ಎಂದೆ
ಕವಿತೆ ಕೇಳಿತು
ಎಡಕ್ಕೆ ಹಾರಬೇಕೋ
ಇಲ್ಲ ಬಲಕ್ಕೊ?
ನಾನೆಂದೆ ನೀನೊಂದು ಸುಂದರ ಕವಿತೆ
ಎಡಬಲಗಳ ಗೊಂದಲದಲಿ ನೀನೇಕೆ ಕುಳಿತೆ
ರೆಕ್ಕೆ ಇದೆ ಹಾರು ಹೋಗು !

ಆಕಾಶವಾಣಿಯೊಂದು ನುಡಿಯಿತು
ಮೂಢ ! ಎಡಕ್ಕೆ ಹಾರಿದರೆ ಅವರು
ಬಲಕ್ಕೆ ಹಾರಿದರೆ ಇವರು
ನೇರಕ್ಕೆ ಹೋದರೆ ಅವರಿವರು
ಕಲ್ಲು ಎಸೆಯುವರು ಎಚ್ಚರ !
ದಿಗಿಲಾಗಿ ಕುಳಿತೆ
ಸುಂದರ ಕವಿತೆಗೆ ಇಷ್ಟೊಂದು ತೊಂದರೆಯೇ?

ಮತ್ತೆ ಕೇಳಿತು ಕವಿತೆ
ದಿಕ್ಕು ತಪ್ಪಿ ದಾರಿಗಾಗಿ ಕೈಮರವ
ಕೇಳುತ್ತಿರುವ ಮನುಷ್ಯನೇ
ಬೇಗ ಹೇಳು ಎತ್ತ ಹಾರಲಿ ?
ಗೊಂದಲದಲಿ ಕುಳಿತ ನಾನು
ಕವಿತೆಗ್ಯಾವ ದಿಕ್ಕು ತೋರಿಸಲಿ ?
ಕವಿತೆ ಮತ್ತೆ ಮತ್ತೆ ಪೀಡಿಸತೊಡಗಿತು
ಕಾಡಿಸತೊಡಗಿತು

ದಾರಿ ಕಾಣದೇ ಅತ್ತಿತ್ತ ಕಣ್ಣಾಡಿಸಿದೆ
ಸಮೀಪದಲ್ಲೊಂದು ಆಲದ ಮರ ಕಂಡಿತು
ತಡಮಾಡದೆ ಕವಿತೆಯ ರೆಕ್ಕೆಪುಕ್ಕ ಕತ್ತರಿಸಿ
ನೇತು ಹಾಕಿದೆ
ದಾರಿ ಹುಡುಕುತ ಕುಳಿತೆ !

ಕಟ್ಟಬೇಕಿದೆ

ಅರೆಬೆಂದ, ಸುಟ್ಟ
ದೇಹದ ಮೇಲೆ
ಮುಲಾಮು ಹಚ್ಚಬೇಕಿದೆ,
ಕೊಳೆತ ವಾಸನೆ ಹೆಚ್ಚಾಗದಂತೆ
ಸೆಂಟು ಹೊಡೆಯಬೇಕಿದೆ
ಒತ್ತರಿಸಿ ಬರುವ
ನೆನಪುಗಳು ಮರೆಯಬೇಕಿದೆ
ನಾಳೆಯ ಹೊಸ ಕನಸುಗಳಿಗಾಗಿ
ಕಣ್ಣು ತೆರೆಯಬೇಕಿದೆ
ರೆಕ್ಕೆಯಗಲಿಸಿ ಕುಳಿತ
ಹದ್ದುಗಳ ಹೊಡೆದೋಡಿಸಿ
ಪಾರಿವಾಳಗಳ ಕೂಗಿ
ಬಿದ್ದ ಮೀನಾರುಗಳ
ಇಟ್ಟಿಗೆಯಿಂದಲೇ
ಕಟ್ಟಬೇಕಿದೆ
ಹೊಸ ಬದುಕು

ರಾತ್ರಿ

ಸೂರ್ಯನ  ತಾಪ

ತಾಳದೆ

ಚಂದ್ರ  ಹಿಡಿದ

ಛತ್ರಿ!

ಕೋಟೆಯ ಕಲ್ಲು

ಹಸಿರು ಕೆರೆಯ 

ನಡುವೆಯೊಂದು

ಏಳು ಸುತ್ತಿನ ಕೋಟೆ

ಕಲ್ಲು ಎತ್ತಿಟ್ಟವರಾರು ?

ರಾಜ್ಯವಾಳಿದವರಾರು?

ಇತಿಹಾಸದ ಪುಟಗಳ ತುಂಬ

ನೂರೆಂಟು ಮುಖಗಳ ಬಿಂಬ

ಕೆಲವು ಕೆಂಪು, ಕೆಲವು ಹಸಿರು

ಮೂಡದೇ ಇರುವ

ಚಿತ್ರಗಳೂ ಬಹಳ,

ಇತಿಹಾಸದ ಪುಟಗಳಿಂದ

ಚಿತ್ರಗಳ ಅಳಿಕಿಸಿದವರಾರು ? 

ಹೇಳು ,

ಎತ್ತರೆತ್ತರಕ್ಕೆ  ಏರಿ ನಿಂತ ಕೋಟೆಗೆ

ಕಲ್ಲು ಎತ್ತಿಟ್ಟವರಾರು?

ಹಸಿರು ಕೆಂಪುಗಳ ನಡುವೆ

ಹರಿಯುತಿದೆ ರಕ್ತದ ಕಾಲುವೆ

ರಕ್ತದ ಕಲೆಗೆ ಬಣ್ಣ ಬಳಿದವರಾರು ?

ಬಾವುಟವಾರಿಸುವ ಮುನ್ನ

ಹೇಳು, ಈ ಕೋಟೆಗೆ

ಕಲ್ಲನ್ನು ಹೊತ್ತವರಾರು ?

ಕೋಟೆಯ ಕಲ್ಲಿನಲ್ಲಿಯೇ

ಮನೆ ಕಟ್ಟಿಕೊಳ್ಳುತ್ತಿರುವವನೆ

ಕೋಟೆಗೆ ಕಲ್ಲಾದವರು

ಯಾರು ?